ಹವ್ಯಕ
ಸುವರ್ಣ ಕರ್ನಾಟಕದಲ್ಲಿ (ಹಾಗೂ ವಿಶ್ವದ ಹಲವು ದೇಶಗಳಲ್ಲಿ) ಎರಡು ಸಾವಿರ ವರ್ಷಗಳ ಇತಿಹಾಸವಿರುವ “ಹವ್ಯಕ” ಎನ್ನುವ ಒಂದು ಸ್ಮಾರ್ಥ ಬ್ರಾಹ್ಮಣ ಸಮುದಾಯವಿದೆ. ಹವ್ಯಕರ ಆಚಾರ-ವಿಚಾರ, ಸಂಸ್ಕಾರ, ಕಲಾಸಕ್ತಿ, ಹಳೆಗನ್ನಡವನ್ನು ಹೋಲುವ ಅವರ ತಾಯ್ನುಡಿ ವಿಭಿನ್ನ ಹಾಗೂ ವೈಶಿಷ್ಟ್ಯಪೂರ್ಣವಾಗಿದೆ. ಇಂತಹ ಬುದ್ಧಿವಂತ, ಸಭ್ಯ, ಶಿಷ್ಟ, ಸುಶಿಕ್ಷಿತ ಹವ್ಯಕರ ಪರಿಚಯ ಕೆಳಗಿದೆ.
ಹವ್ಯಕರ ಇತಿಹಾಸ
ಸುಮಾರು ಎರಡು ಸಾವಿರ ವರ್ಷಗಳ ಪೂರ್ವದಿಂದಲೂ ಬನವಾಸಿಯಲ್ಲಿ ಯಜ್ಞಯಾಗಾದಿಗಳನ್ನು ಮಾಡುವ ಸಮರ್ಥ ವೈದಿಕ ಬ್ರಾಹ್ಮಣರು ನೆಲೆಸಿದ್ದರು. ಅದೇ ಕಾಲದಲ್ಲಿ ಜೈನ, ಬೌದ್ಧ, ಕಪಾಲಿಕಾ ಧರ್ಮದ ಪ್ರಭಾವವೂ ಬನವಾಸಿಯಲ್ಲಿ ಹೆಚ್ಚಾಯಿತು. ಸ್ವತಃ ರಾಜರುಗಳು, ಬಹುತೇಕ ಪ್ರಜೆಗಳು ಜೈನ / ಬೌದ್ಧ ಧರ್ಮೀಯರಾದರು. ಹೀಗಾಗಿ ಕಾಲ ಕ್ರಮೇಣ ಆಗಿನ ಕರ್ಮಠ ಬ್ರಾಹ್ಮಣರಿಗೆ ರಾಜಾಶ್ರಯ ಹಾಗೂ ಜನಾಶ್ರಯ ಕಡಿತವಾಯಿತು. ಆ ಕಾಲದ ಕೆಲವು ಬ್ರಾಹ್ಮಣರು ಮತಾಂತರಗೊಂಡು ಭ್ರಷ್ಟರಾದರು. ಆದರೆ ಅನೇಕ ಕರ್ಮಠ ಬ್ರಾಹ್ಮಣರು ಸನಾತನ ವೈದಿಕ ಧರ್ಮವನ್ನು ಕಾಪಾಡಿಕೊಳ್ಳಲು ಬನವಾಸಿ ಹಾಗೂ ಸುತ್ತ ಮುತ್ತಲಿನ ಪ್ರದೇಶನವನ್ನು ತೊರೆದು, ಆಶ್ರಯವನ್ನು ಅರಸಿ ಆಗಿನ ಬ್ರಾಹ್ಮಣರ ಮಹಾಮಂಡಲವೆಂದೇ ಪ್ರಸಿದ್ಧವಾದ ಉತ್ತರ ಪ್ರದೇಶದ ಅಹಿಚ್ಚತ್ರಕ್ಕೆ (ಈಗಿನ ಉತ್ತರ ಪ್ರದೇಶದ ರಾಮನಗರ) ವಲಸೆ ಹೋದರು.
ಸುಮಾರು ಸಾವಿರದ ಆರುನೂರು ವರುಷಗಳ ಹಿಂದೆ ಕನ್ನಡದ ಪ್ರಥಮ ರಾಜನಾದ ಮಯೂರವರ್ಮ ( ಕ್ರಿ.ಶ. 325-345) ತಮಿಳು ರಾಜರಾದ ಪಲ್ಲವರನ್ನ ಸೋಲಿಸಿ ಕನ್ನಡ ಪ್ರದೇಶವನ್ನ ವಶಪಡಿಸಿಕೊಳ್ಳುತ್ತಾನೆ. ಕದಂಬರಾಜ್ಯವನ್ನು ಕಟ್ಟಿ ಬನವಾಸಿಯನ್ನ ರಾಜಧಾನಿಯಾಗಿ ಮಾಡಿಕೊಳ್ಳುತ್ತಾನೆ. ಆ ಕಾಲದಲ್ಲಿ ಮಯೂರವರ್ಮನಿಗೆ ಯಾಗಯಜ್ಞಾದಿಗಳನ್ನು ಮಾಡಲು ಸಮರ್ಥ ವೈದಿಕ ಬ್ರಾಹ್ಮಣರು ಬನವಾಸಿಯಲ್ಲಿ ಸಿಗುವುದಿಲ್ಲ. ಬನವಾಸಿಯಿಂದಲೇ ಹಲವಾರು ವೈದಿಕ ಬ್ರಾಹ್ಮಣರು ಈ ಹಿಂದೆ ಅಹಿಚ್ಚತ್ರಕ್ಕೆ ಹೋಗಿದ್ದನ್ನು ಮನಗಂಡು, ಸ್ವತಃ ಮಯೂರವರ್ಮನೇ ಉತ್ತರ ಪ್ರದೇಶದ ಅಹಿಚ್ಚತ್ರಕ್ಕೆ ತೆರಳಿ ಬನವಾಸಿಯಲ್ಲಿ ಜೈನ ಧರ್ಮದ ಪ್ರಭಾವ ಕಡಿಮೆಯಾಗಿದೆ ಎಂದು ಹೇಳಿ (#1) ಒಟ್ಟು 32 ದ್ರಾವಿಡ ಬ್ರಾಹ್ಮಣರ ಕುಟುಂಬ ಮತ್ತು ಅವರ ಶಿಷ್ಯರನ್ನ ಬನವಾಸಿಗೆ ಪುನಃ ಕರೆದಕೊಂಡು ಬರುತ್ತಾನೆ. ಅವರಿಗೆ ರಾಜಾಶ್ರಯವನ್ನ ನೀಡುತ್ತಾನೆ ಹಾಗೂ ಅವರಿಂದ ಯಾಗಯಜ್ಞಾದಿಗಳನ್ನು, ಧಾರ್ಮಿಕ ಕರ್ಮಗಳನ್ನು ನೆರವೇರಿಸುತ್ತಾನೆ.
ಮಯೂರವರ್ಮನ ಮರಣಾನಂತರ, ಆತನ ಮಿತ್ರ ಹಾಗೂ ಗೋರಷ್ಟ್ರಾಧಿಪತಿಯೂ ಆದ ಚಂಡಸೇನನು ಬನವಾಸಿಯಿಂದ ಕೆಲ ಅಹಿಚ್ಚತ್ರ ಬ್ರಾಹ್ಮಣರನನ್ನ ಈಗಿನ ಉತ್ತರ ಕನ್ನಡ ಜಿಲ್ಲಾ ಪ್ರದೇಶಕ್ಕೆ ಕರೆದುಕೊಂಡು ಬರುತ್ತಾನೆ. ಚಂಡಸೇನನ ಕಾಲನಂತರ ಅವನ ಮಗ ಹಾಗೂ ಮಯೂರವರ್ಮನ ಅಳಿಯನಾದ ರಾಜ ಲೋಕಾದಿತ್ಯನು ಹವ್ಯಾ ಕವ್ಯಾದಿ ಗಳಿಗೆ ಪ್ರಸಿದ್ಧರಾದ ಈ ಅಹಿಚ್ಚತ್ರೀಯ ಬ್ರಾಹ್ಮಣರಿಗೆ “ಹವ್ಯಕ” ಎಂದ ನಾಮಧೇಯ ನೀಡುತ್ತಾನೆ (#2)
ಹವ್ಯಕರ ಗುರು ಪೀಠ / ಮಠ ಗಳು.
ಸಮಗ್ರ ಹವ್ಯಕ ಸಮಾಜದಲ್ಲಿ ಪ್ರಕೃತ ಮೂರು ಗುರು ಪೀಠಗಳಿವೆ. ಅವುಗಳು,
೧. ಶ್ರೀ ರಾಮಚಂದ್ರಾಪುರ ಮಠ (https://srisamsthana.org )
೨. ಶ್ರೀ ಸ್ವರ್ಣವಲ್ಲಿ ಮಠ (https://www.shreeswarnavalli.org )
೩. ಶ್ರೀಮನ್ನೆಲಮಾವು ಮಠ (ಫೇಸ್ ಬುಕ್ ಪೇಜ್ - https://www.facebook.com/share/g/12JsE2Nfwn7/?mibextid=wwXIfr ).
ಸುಮಾರು ಸಾವಿರದ ಇನ್ನೂರು ವರುಷಗಳ ಹಿಂದೆ (ಕ್ರಿ ಶ 820) ಆದಿ ಶಂಕರಾಚಾರ್ಯರಿಂದ ಗೋಕರ್ಣದ ಅಶೋಕೆಯಲ್ಲಿ ಹವ್ಯಕರ ಪ್ರಥಮ ಗುರು ಪೀಠ ‘ರಘೂತ್ತಮಮಠ’ ಸ್ಥಾಪನೆ ಆಗುತ್ತದೆ. ಅದಕ್ಕೆ ತಮ್ಮ ಪ್ರಶಿಷ್ಯರಾದ ವಿದ್ಯಾನಂದಾಚಾರ್ಯರನ್ನ ಮೊದಲ ಪೀಠಾಧಿಪತಿಗಳನ್ನಾಗಿ ಮಾಡುತ್ತಾರೆ. ಆ ಮಠ ಕೊನೆಗೆ ಕರ್ನಾಟಕದ ಹೊಸನಗರದ (ಹನಿಯ) ಹತ್ತಿರ ಸ್ಥಳಾಂತರಗೊಂಡು “ಶ್ರೀ ರಾಮಚಂದ್ರಾಪುರ ಮಠ” ವಾಗುತ್ತದೆ. ಈ ಮಠ ಬಹುಸಂಖ್ಯಾತ ಹವ್ಯಕರಿಗೆ ಗುರುಪೀಠವಾಗಿದೆ. ಮಠದ ಈಗಿನ 36 ನೇ ಪೀಠಾಧಿಪತಿಗಳು/ ಗುರುಗಳು ಪರಮಪೂಜ್ಯ ಶ್ರೀಮದ್ ಜಗದ್ಗುರು ಶ್ರೀ ಶಂಕರಾಚಾರ್ಯ
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಜೀ.
ಶ್ರೀ ಶಂಕರ ಭಗವತ್ಪಾದರಿಂದ ಕಾಶಿಯಲ್ಲಿ (ಕ್ರಿ ಶ 810 ರಿಂದ 820) ಶುರುವಾದ ಮತ್ತೊಂದು ಮಠವೊಂದು ಉಜ್ಜಯಿನಿ, ಗೋಕರ್ಣ, ಕಡತೋಕೆ, ಸಹಸ್ರಲಿಂಗ ಮಾರ್ಗವಾಗಿ ಸೊಂದಾಕ್ಕೆ (ಶಿರಸಿ, ಕರ್ನಾಟಕ) ಸ್ಥಳಾಂತರಗೊಂಡು “ಶ್ರೀ ಸ್ವರ್ಣವಲ್ಲಿ ಮಠ” ವಾಗುತ್ತದೆ. ಈ ಮಠ ಯಲ್ಲಾಪುರ, ಶಿರಸಿ ಹಾಗೂ ಭಾಗಶಃ ಸಿದ್ದಾಪುರ ತಾಲೂಕಿನ ಹವ್ಯಕರಿಗೆ ಗುರುಪೀಠವಾಗಿದೆ. ಮಠದ ಈಗಿನ 54 ನೇ ಪೀಠಾಧಿಪತಿಗಳು/ ಗುರುಗಳು ಪರಮ ಪೂಜ್ಯ ಶ್ರೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು.
ಸುಮಾರು 650 ವರ್ಷಗಳ ಹಿಂದೆ ( ಕ್ರಿ ಶ 1380) ವಿಜಯನಗರ ಸ್ಥಾಪನೆಗೆ ಕಾರಣರಾದ ವಿದ್ಯಾರಣ್ಯರಿಂದ ಕರ್ನಾಟಕದ ಸಿದ್ದಾಪುರ ತಾಲೂಕಿನ ಹೇರೂರಿನಲ್ಲಿ ಹವ್ಯಕರ ಮೂರನೇ ಗುರುಪೀಠ “ನೆಲಮಾವು ಮಠ” ಸ್ಥಾಪನೆ ಆಗುತ್ತದೆ. ಈ ಮಠ ಸಿದ್ದಾಪುರ ಹೇರೂರು ಸೀಮೆ ಹಾಗೂ ಹೊನ್ನಾವರ ತಾಲೂಕಿನ ೫ ಗ್ರಾಮಗಳ ಹವ್ಯಕರಿಗೆ ಗುರುಪೀಠವಾಗಿದೆ. ಮಠದ ಈಗಿನ 26 ನೇ ಪೀಠಾಧಿಪತಿಗಳು/ ಗುರುಗಳು ಶ್ರೀ ಶ್ರೀಮದ್ ಮಾಧವಾನಂದ ಭಾರತಿ ಮಹಾ ಸ್ವಾಮಿಗಳು.
ಹವ್ಯಕರ ತಾಯ್ನುಡಿ, ಹವಿಗನ್ನಡ
ಹವ್ಯಕರ ಆಡುಭಾಷೆ ಕನ್ನಡದವೇ ಆಗಿದ್ದರೂ ಈಗಿನ ಹೊಸ ಕನ್ನಡಕ್ಕಿಂತ ಭಿನ್ನವಾದದ್ದು. ಹಳೆಗನ್ನಡಕ್ಕೆ ತೀರಾ ಹತ್ತಿರವಾದ ಭಾಷೆಯಾದ್ದರಿಂದ ಇದನ್ನ ಕನ್ನಡ ಉಪಭಾಷಯೆಂದು ಹೇಳಲಾಗಿದೆ. ಹೊಸ ಕನ್ನಡಕ್ಕಿಂತ ಹೆಚ್ಚು ಹಳೆಗನ್ನಡದ ಪದಗಳು ಹವ್ಯಕರ ತಾಯ್ನುಡಿ ಯಲ್ಲಿರುವುದು ಒಂದು ವಿಶೇಷ.
ಕಳೆದ 30 ವರ್ಷಗಳ ಹಿಂದೆ ಡಾ|| ಹರಿಕೃಷ್ಣ ಭರಣ್ಯರು ಹವ್ಯಕರ ಭಾಷೆಗೆ ‘ಹವಿಗನ್ನಡ’ ಎಂದು ಕರೆದರು. ಅಂದಿನಿಂದ ಈಗಲೂ ಹವ್ಯಕರ ಸಾಹಿತ್ಯದಲ್ಲಿ ಹವ್ಯಕರ ತಾಯ್ನುಡಿಯನ್ನು ಹವಿಗನ್ನಡ ಎಂದೇ ಕರೆಯಲಾಗಿದೆ.
ಹವಿಗನ್ನಡದ ವೈಶಿಷ್ಟ್ಯಗಳ ಹೀಗಿವೆ,
ಹವಿಗನ್ನಡದಲ್ಲಿ “ಡ”, ‘ಆಡ’, ‘ಎಡ’ ಶಬ್ದಗಳ ಬಳಕೆ – ಇದು ಹಳೆಗನ್ನಡದ ‘ಗಡ’ ಅಥವಾ ‘ಗಡು’ ಶಬ್ದದಿಂದ ಬಂದದ್ದು. ಉದಾ. ಹೋಗಡ, ನೋಡಡ, ಹೋವುತ್ತವಡ, ಇತ್ಯಾದಿ
ಹವಿಗನ್ನಡದಲ್ಲಿ ಸ್ತ್ರೀಲಿಂಗ ಇಲ್ಲ. ಸ್ತ್ರೀಲಿಂಗ ನಪುಂಸಕ ಲಿಂಗವಾಗುತ್ತದೆ – ಉದಾ. ಅಕ್ಕ ಬಂದಿದಾಳೆ ಎನ್ನುವುದು ಅಕ್ಕ ಬಯಿಂದು/ ಬಂಜು ಆಗುತ್ತದೆ, ಆಯಿ ಬರುತ್ತಾಳೆ ಅನ್ನುವುದು ಆಯಿ ಬತ್ತು ಆಗುತ್ತದೆ, ಇವಳು ಮಾಡುತ್ತಾಳೆ ಅನ್ನುವುದು ಇದು ಮಾಡ್ತು/ ಮಾಡ್ತಾ ಆಗುತ್ತದೆ.
ಹವಿಗನ್ನಡದಲ್ಲಿ ಕೆಲವೊಂದು ಶಬ್ದಗಳನ್ನ ಸಾನುನಾಸಿಕಗಳಂತೆ (Nasal) ಮೂಗಿನಲ್ಲಿ ಉಚ್ಚಾರ ಮಾಡುಲಾಗುತ್ತದೆ – ಉದಾ, ಅವ, ಬಾವ, ಆನು ಇತ್ಯಾದಿ.
ಹವಿಗನ್ನಡದಲ್ಲಿ ಕನ್ನಡದ ಶಬ್ದಗಳನ್ನ ಸಂಕ್ಷಿಪ್ತವಾಗಿ ಒತ್ತಕ್ಷರಗಳಲ್ಲಿ ಹೇಳಲಾಗುತ್ತದೆ. ಉದಾ, ನೀನು ಬರಬೇಕು – ನೀನ್ಬರಕ್ಕು/ ನೀನ್ಬರವು, ತಿನ್ನುತ್ತಾನೆ – ತಿಂತ್ನಡ / ತಿಂತನಡ ಆಗುತ್ತದೆ.
ಹವ್ಯಕರ ಭಾಷೆಯಾದ ಹವಿಗನ್ನಡವನ್ನ ಬಡಗು (ಉತ್ತರ ಸೀಮೆ) ಮತ್ತು ತೆಂಕಣ (ದಕ್ಷಿಣ ಸೀಮೆ) ಎಂದು ವಿಂಗಡಣೆ ಮಾಡಬಹುದು.
ಹಾಗೂ ಹವಿಗನ್ನಡಲ್ಲಿ 6 ಪ್ರಾದೇಶಿಕ ಪ್ರಬೇಧಗಳು ಇವೆ.
ಬಡಗು ಹವಿಗನ್ನಡದಲ್ಲಿ ಮೂರು -
ಕರಾವಳಿ(ಘಟ್ಟದ ಕೆಳಗೆ),
ಘಟ್ಟದ ಮೇಲೆ (ಶಿವಮೊಗ್ಗ, ಸಿರ್ಸಿ, ಬನವಾಸಿ)
ಸಾಗರ ಪ್ರಾಂತ್ಯ.
ತೆಂಕಣ ಹವಿಗನ್ನಡದಲ್ಲಿ ಮೂರು -
ಪಂಜ ಪ್ರಾಂತ್ಯ
ವಿಟ್ಲ ಪ್ರಾಂತ್ಯ
ಕುಂಬ್ಳೆ ಪ್ರಾಂತ್ಯ.
ಹವ್ಯಕರ ವಲಸೆ
ಹವ್ಯಕರ ಪೂರ್ವಜರು ಬನವಾಸಿಯ ಮತ್ತು ಸುತ್ತಮುತ್ತಲಿನ ಪ್ರದೇಶದಿಂದ ಉತ್ತರ ಪ್ರದೇಶದ ಅಹಿಚ್ಛತ್ರಕ್ಕೆ ವಲಸೆ ಹೋಗಿ, ಅಲ್ಲಿಂದ ಮಯೂರವರ್ಮನ ಕಾಲದಲ್ಲಿ ಸ್ವದೇಶವಾದ ಬನವಾಸಿ ಮರಳಿ ಬರುತ್ತಾರೆ. ರಾಜ ಚಂಡಸೇನನ ಕಾಲದಲ್ಲಿ ಗೋರಾಷ್ಟ್ರದೇಶ ಅಂದರೆ ಈಗಿನ ಉತ್ತರ ಕನ್ನಡ ಜಿಲ್ಲಾ ಪ್ರದೇಶದಲ್ಲಿ ಕೆಲವರು ಬಂದು ನೆಲಸುತ್ತಾರೆ. ಕಾಲಕಳೆದಂತೆ ರಾಜಾಶ್ರಯ ಕ್ರಮೇಣ ಕಡಿಮೆ ಆಗುತ್ತಾ ಬರುತ್ತದೆ. ಆಗ ಅಡಿಕೆ, ತೆಂಗು, ಬಾಳೆ ಇತ್ಯಾದಿ ಕೃಷಿಯನ್ನ ಅವಲಂಬಿಸಿ ಶಿವಮೊಗ್ಗ ಜಿಲ್ಲೆ, ಸಿದ್ದಾಪುರ, ಶಿರಸಿ, ಯಲ್ಲಾಪುರದಲ್ಲಿ ಹವ್ಯಕರು ನೆಲಸುತ್ತಾರೆ. ಕೊನೆಗೆ ಉತ್ತರಕನ್ನಡ ಜಿಲ್ಲೆಯಲ್ಲಿ ಹವ್ಯಕರ ವಲಸೆ ಮುಂದುವರೆದು ಕೊನೆಗೆ ಗೋಕರ್ಣದಿಂದ ಕುಂದಾಪುರದ ಗಂಗೊಳ್ಳಿ ನದಿಯವರೆಗೂ ನೆಲಸುತ್ತಾರೆ.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಹವ್ಯಕರ ವಲಸೆ ಶುರುವಾಗಿದ್ದು ಸುಮಾರು ಕ್ರಿ ಶ 16 ನೇ ಶತಮಾನದ ಆದಿ ಅಥವಾ ಮಧ್ಯದಲ್ಲಿ. ಕೆಳದಿ ಅರಸರಾದ ಹಿರಿಯ ವೆಂಕಟಪ್ಪ ನಾಯಕರು ಸೊರಬದ ಜಂಬೆಹಳ್ಳಿಯಿಂದ ಹವ್ಯಕರ ಕುಟುಂಬವನ್ನ ದಕ್ಷಿಣ ಕನ್ನಡ ಜಿಲ್ಲೆ ಕರೆತರುತ್ತಾರೆ, ಕೊನೆಗೆ ಉತ್ತರಕನ್ನಡ ಜಿಲ್ಲೆಯಿಂದ ಉಡುಪಿಯ ದಕ್ಷಿಣದಿಂದ ಕಾಸರಗೋಡಿನ ಪಯಸ್ವೀನಿ ನದಿಯ ವರೆಗೂ ಹವ್ಯಕರು ಹರಡುತ್ತಾರೆ. ಸುಮಾರು ಕ್ರಿ ಶ 17 ನೇ ಶತಮಾನದಲ್ಲಿ ಹಾಲೇರಿ ಅರಸರು ಸಾಗರದ ಹವ್ಯಕರನ್ನ ಕೊಡಗಿಗೆ ಕರೆತರತ್ತಾನೆ ಇದೇ ಕಾಲದಲ್ಲಿ ಕೆಲವು ಹವ್ಯಕರು ದಕ್ಷಿಣ ಕನ್ನಡದಿಂದ ಕೊಡಗಿಗೆ ವಲಸೆ ಹೋಗುತ್ತಾರೆ. ಹೀಗೆ ಹವ್ಯಕರು ಅಹಿಚ್ಛತ್ರದಿಂದ ಬಂದ ಮೇಲೆ ಸುಮಾರು ಕ್ರಿ ಶ 320 ರಿಂದ 18 ನೇ ಶತಮಾನದ ಮಧ್ಯದವರೆಗೆ ಕರ್ನಾಟಕ ಎಲ್ಲೆಡೆ ಹರಡಿ, ಕರ್ನಾಟಕವನ್ನ ತಮ್ಮ ಮೂಲ ನೆಲಯನ್ನಾಗಿಸಿ ಕೊಂಡರು. ಸ್ವಾತಂತ್ರ ಪೂರ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯ ಹವ್ಯಕರು ಮುಂಬಯಿ, ಪುಣೆಗೆ; ಸಾಗರ, ಶಿವಮೊಗ್ಗ ಪ್ರಾಂತ್ಯದಿಂದ ಬೆಂಗಳೂರು, ಮೈಸೂರಿಗೆ; ದಕ್ಷಿಣ ಕನ್ನಡ ದಿಂದ ಚೆನ್ನೈಗೆ, ಕೇರಳದ ರಾಜ್ಯದ ದಕ್ಷಿಣಕ್ಕೆ ವಲಸೆ ಹೋಗುತ್ತಾರೆ.
ಈಗ ಹವ್ಯಕರು ವಿಶ್ವದೆಲ್ಲೆಡೆ ಹರಡಿ ಅಮೇರಿಕ, ಕೆನಡಾ, ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂ ಜೀಲ್ಯಾಂಡ್, ಸಿಂಗಾಪುರ್ ಮತ್ತು ಅರಬ್ ದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ.
ಆಕರ ಗ್ರ೦ಥಗಳು,
ಹವ್ಯಕರ ಇತಿಹಾಸ ದರ್ಶನ. ಲೇಖಕ . ಹೆಚ್.ಎಂ ತಿಮ್ಮಪ್ಪ ಕಲಸಿ. ಪ್ರ, ಹವ್ಯಕ ಅಧ್ಯಯನ ಕೇಂದ್ರ, ಶ್ರೀ ಅಖಿಲ ಹವ್ಯಕ ಮಹಾಸಭಾ. 2012.
ಸ್ಕಂದಪುರಾಣದ ಉತ್ತರ ಸಹ್ಯಾದ್ರಿ ಖಂಡ. ಪ್ರ, ಹೊಸಬಾಳೆ ಅನಂತ ಶರ್ಮ, ನಡಹಳ್ಳಿ ಪ್ರೆಸ್ – 1912.
ಹವ್ಯಕ ಸಮಾಜ ಮತ್ತು ಶ್ರೀ ಗುರುಮಠದ ಇತಿಹಾಸ. ಲೇಖಕ, ವೈದ್ಯ. ಗ. ಸು. ಪಾಟೀಲ, ಬರಿಗೆ. ಪ್ರ- ಶ್ರೀಮದ್ರಾಮಚಂದ್ರಾಪುರ ಮಠ, ತೀರ್ಥಹಳ್ಳಿ – 1954.
ಹವಿಗನ್ನಡ ಚಿಂತನ- ಲೇಖಕ. ನಾರಾಯಣ ಶಾನಭಾಗ – 2006
ಹವ್ಯಕರ ಗ್ರಂಥಕಾರ ಕೃತಿ ಸೂಚಿ - ಲೇಖಕ. ನಾರಾಯಣ ಶಾನಭಾಗ - 2005
ಹವ್ಯಕರನನ್ನ ಪರಿಚಯಿಸುವ ವಿಡಿಯೋಸ್:
ಆಸ್ಟ್ರೇಲಿಯಾದವರೇ ಆದ ಶ್ರೀ ರಂಗನಾಥ ಅವರು ಮಾಡಿರುವ ಹವ್ಯಕರ ಸಂಪೂರ್ಣ ಪರಿಚಯವನ್ನುಮಾಡುವ ವಿಡಿಯೋ ಸರಣಿಯನ್ನ ಅವರ ಯೂಟ್ಯೂಬ್ ಚಾನೆಲ್ ನಲ್ಲಿ ನೋಡಬಹುದು - www.youtube.com/@PustakaRanga ಮತ್ತು ಪ್ಲೇ ಲಿಸ್ಟ್ – ‘ಹವ್ಯಕರ ಸಂಪೂರ್ಣ ಪರಿಚಯ / A Complete Guide to Havyaka’ (https://youtube.com/playlist?list=PL9fEvYIsckQPC35gJh2zRjgZ7qqQHwlQu&si=DQF_oVNg2_0WlhI6)
(#1) – “ಜೈನನಿಗ್ರಹವೇಲಯಾ೦ ಸಮವೇತಾ ಮಹೋತ್ಸಾಹ” – ಉತ್ತರ ಸಹ್ಯಾದ್ರಿಖಂಡ 85ನೇ ಅಧ್ಯಾಯ 15 ನೀ ಶ್ಲೋಕ.
(#2) – “ಹವ್ಯಕಾಶ್ಚೇತಿ ವಿಪ್ರಾಣಂ ನಾಮಧೇಯಂ”- ಉತ್ತರ ಸಹ್ಯಾದ್ರಿಖಂಡ.